Wednesday, May 6, 2020

ಆ ಕೊನೆಯ ಬೆಂಚಲ್ಲಿ ಕುಳಿತು
ಓರೆಗಣ್ಣಿನಲಿ ನೋಡುತ್ತಾ
ಎದೆಬಡಿತ ಹೆಚ್ಚಿಸುತ್ತಿದ್ದ ನಿನ್ನ
ತುಂಟು ಕಂಗಳ ನಾನಿನ್ನೂ ಮರೆತಿಲ್ಲ

ಮಾತನಾಡುವ ಹಂಬಲವಿದ್ದೂ
ಮಾತನಾಡದೇ ಉಳಿದ ಅದೆಷ್ಟೋ
ಮಾತುಗಳ ನಾ ಇನ್ನೂ ಮರೆತಿಲ್ಲ

ಇಬ್ಬರೇ ಇದ್ದಾಗಲೂ ಒಂದಿನಿತು
ಮಾತನಾಡದೇ ಮೌನವಾಗಿಯೇ
ಕಳೆದ ಆ ಘಳಿಗೆಯ ನಾನಿನ್ನೂ ಮರೆತಿಲ್ಲ

ಮೌನ ಮುರಿಯುವ ನೆಪದಲ್ಲಿ
ನಿನ್ನೆಡೆಗೆ ಮುಗುಳ್ನಕ್ಕಾಗ ಗಾಬರಿಯಿಂದ
ನೀ ಎದ್ದು ಹೋದದ್ದನ್ನ ನಾ ಇನ್ನೂ ಮರೆತಿಲ್ಲ

ಕಾಲೇಜಿನ ಗಂಟೆ ಬಾರಿಸುತ್ತಲೆ ಒಬ್ಬಳೇ
ನಡೆದು ಹೋಗಿಬಿಡುತ್ತಿದ್ದ ನಿನ್ನ ಕಂಡು
ಪೆಚ್ಚುಮೋರೆ ಹಾಕಿಕೊಳ್ಳುತ್ತಿದ್ದ ದಿನಗಳ
ನಾ ಇನ್ನೂ ಮರೆತಿಲ್ಲ

ಬಸ್ಸು ನಿಲ್ದಾಣದಲ್ಲಿ, ಆಟೋ ಸ್ಟ್ಯಾಂಡಿನಲ್ಲಿ
ನಿನ್ನೂರಿನ ಬೀದಿಗಳಲ್ಲಿ ಎದುರಾದಾಗ
ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸಿದ
ನಿನ್ನ ನಟನೆಯ ನಾ ಇನ್ನೂ ಮರೆತಿಲ್ಲ

ಮೌನವನೆ ಹೊದ್ದವರಂತೆ
ಮೌನದಲ್ಲಿಯೇ ಮುಳುಗಿ
ನನಗೂ ಮೌನದ ಅಮಲೇರಿಸಿದ
ನಿನ್ನ ನಾ ಇನ್ನೂ ಮರೆತಿಲ್ಲ...

- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ