Monday, May 11, 2020

ಪ್ರೇಮದ ಗಾಢತೆ ಅರಿವೆಯಾದರೆ
ಹೃದಯವನ್ನೊಮ್ಮೆ ಹೊಕ್ಕು ನೋಡು;
ಪ್ರತಿ ಮಿಡಿತವು ಗುನುಗುತಿದೆ ನಿನ್ನದೇ ಹಾಡ..
- ಎನ್.ಬಿ

ನೀ ನಗುವೆಯಾದರೆ
ಸೋಲಲು ನಾ ಸದಾ ಸಿದ್ಧ;
ಆಗಲಾದರೂ ಹೃದಯತುಂಬಿ
ನಗುವುದ ನೀ ಮರೆಯದಿರು..
- ಎನ್.ಬಿ
ನೀನು ಹರಣ ಮಾಡ ಹೊರಟ
ಚಾರಿತ್ರ್ಯ ನನ್ನದೇಯಾದರೂ;
ಅನಾವರಣಗೊಂಡವ ಮಾತ್ರ
ನೀನೇ ಅಲ್ಲವೇ ಗೆಳೆಯ?
- ಎನ್.ಬಿ

ನೀನು ಬೆವರು ಸುರಿಸುತ್ತೀಯೋ
ನೆತ್ತರು ಹರಿಸುತ್ತಿಯೋ ಕೆಲಸವಾದರೆ ಸಾಕು
ನಿನ್ನ ನೋವು- ನಲಿವದೋ ದೂರದ ಮಾತು
ಮೈಮುರಿದು ನೀ ದುಡಿದರಾಯಿತು
ಬಿಡಿ ಕಾಸಿಗೆ; ಹಿಡಿ ಕೂಳಿಗೆ..
- ಎನ್.ಬಿ



ನಾ ಕಂಡ ಬುದ್ದ ಅವ
ನಿತ್ಯ ಬೆಳಕು
ಸತ್ಯ, ಶಾಂತಿ, ಪ್ರೀತಿಯ
ಚಿರಂತನ ಬೆಳಕು
ತ್ಯಾಗ, ಕರಣೆ, ವಾತ್ಸಲ್ಯದ
ಶಾಶ್ವತ ಬೆಳಕು..
ಮಾನವೀತೆ ಮಮಕಾರದ
ಮಹಾ ಬೆಳಕು
ಬುದ್ಧನೆಂದರೆ ಬೆಳಕಷ್ಟೇ ಅಲ್ಲ
ಮನುಷ್ಯ ಪ್ರೇಮದ ಸನ್ಮಾರ್ಗ
- ಎನ್.ಬಿ



ಅಮ್ಮನೆಂದರೆ,
ಬಿರುಗಾಳಿಯ ಬಿರುಸನೆಚ್ಚಿಸಿ
ಕೋಲ್ಮಿಂಚಿನ ಮಳೆಯ ಸುರಿಸಿ
ಗಾಳಿಯಲಿ ಕೋಲಾಹಲವೆಬ್ಬಿಸಿ
ಮೋಡಗಳಲಿ ದರುಶನ ಕೊಡುವವಳಲ್ಲ...

ತನ್ನ ಮಡಿಲಿನಲಿ ನಮ್ಮ ಬೆಳೆಸಿ
ಕಷ್ಟ-ಸುಖಗಳ ತನ್ನದಾಗಿಸಿ
ನಗುವಿನಲಿ ನೋವ ಮರೆಸಿ
ಕಲ್ಲಿನಲೂ ಕರುಣೆ ಹುಟ್ಟಿಸಿ
ನಿಷ್ಕಾರಣವಾಗಿ ಪ್ರೀತಿಸುವವಳು..
- ಎನ್.ಬಿ






ನನಗದು ತಿಳಿದಿದೆ
ನಿನಗೆ ಮತ್ತೊಂದು ಪ್ರೀತಿ ಸಿಕ್ಕಿದೆಯೆಂದು
ನಿನ್ನ ಬಂಗಾರದಂತಹ ಮಾತುಗಳಿಗೆ ಸಿಲುಕಿದವಳು
ನಿನ್ನ ಮನಸ್ಸನರಿತಿರುವೆನೆಂದು ಭಾವಿಸಿರುವಳು
ಹುಚ್ಚು ಹುಡುಗಿ ನನ್ನಂತೆಯೇ ಅವಳು..

ನನಗದು ತಿಳಿದಿದೆ
ನೀ ಇನ್ನೊಂದು ಮನಸ್ಸು ಮುರಿಯುತ್ತಿರುವೆಯೆಂದು
ಒಂದುವೇಳೆ  ಹೇಳಿದರೂ
ಅಲ್ಲಿಂದ ಸಾಗುಹಾಕಿಬಿಡುವಳು
ನನ್ನನ್ನೇ ಅಪಾರ್ಥಿಸಿಕೊಂಡು..
ಹಾಗಾಗಿ ನಾ ಮಾಡುವುದೇನೂ ಉಳಿದಿಲ್ಲ
ಹುಚ್ಚು ಹುಡುಗಿ ನನ್ನಂತೆಯೇ ಅವಳು..

ನನಗದು ತಿಳಿದಿದೆ
ಅವಳನ್ನೂ ತೊರೆಯುವ ಸಿದ್ಧತೆಯಲ್ಲಿ ನೀನಿರುವೆ
ಅಳುವಳು, ಅಚ್ಚರಿಪಡುವಳು
ಅವಳಿಂದ ನೀ ದೂರಾದ ಕಾರಣವನು ಅರಿಯದೇ..

ಕೊನೆಗೆ ಅವಳೂ ಆರಂಭಿಸುವಳು
ಈ ಹಾಡು ಹಾಡಲು
ಹುಚ್ಚು ಹುಡುಗಿ ನನ್ನಂತೆಯೇ ಅವಳು..

ಭಾವಾನುವಾದ: ನವೀನ ಬೂದನೂರು
ಮೂಲ ಕವಿತೆ: ಪೂಅರ್ ಗರ್ಲ್ - ಮಾಯಾ ಏಂಜಲೋ






Thursday, May 7, 2020

ಕವನ ಬರ್ದು ಕೈಗಿಟ್ಟಾಗೆಲ್ಲಾ
ಓದಿ ನಗ್ತಿದ್ ನಿನ್
ಕಂಡು ಮನಸಿಗೆ ಖುಶಿಯಾಗ್ತಿತ್ತು
ಹುಮ್ಮಸ್ಸು  ಹೆಚ್ಚಾಗಿ ಇನ್ನೊಂದೆರ್ಡ್
ಕವನ ಜಾಸ್ತಿಯಾಗ್ತಿದ್ವು..
ಓದಿ ನಗೋ ನಿನ್ನ ನೋಡಿ
ಅದರ ಭಾವ ತಿಳ್ದಿ ಅಂದ್ಕೊಳ್ತಿದ್ದೆ
ಮತ್ತಷ್ಟು ಕನಸು ಕಾಣ್ತಿದ್ದೆ; ಕವನ ಬರೀತಿದ್ದೆ..
ಅವ್ನೆಲ್ಲಾ ಮೆಚ್ಕೊಂಡ ನಗ್ತಿದ್ ನೀನು
ನನ್ ಬಿಟ್ಟು ಅದ್ಹೆಂಗ ದೂರಾದಿ??
ನೆನಸ್ಕ್ಯಂಡ್ರ ವಿಚಿತ್ರ ಅನಿಸ್ತಾತಿ..
ಆದ್ರೂ ನನಿಗೆ ಅರಿವಾಗೇತಿ ನೀ
ನಗ್ತಿದ್ದು ಕವನ ಓದಿದ್  ಖುಶಿಗಲ್ಲ
ಅದ್ರಾಗಿನ ನನ್ ಹುಚ್ತನ ನೋಡಿ ಅಂತಾ..
ಈಗೀಗ ನನ್ ಕವನ ನಾನ ಓದ್ತಾನಿ
ಓದ್‌ದಾಗೆಲ್ಲಾ ನಾನು ನಗ್ತಾನಿ
ನನ್ ಹುಚ್ತನ ಕಂಡಲ್ಲ; ಅವ್ನ
ಅರ್ಥ ಮಾಡ್ಕೊಳ್ದಿರೋ ನಿನ್ ದಡ್ತನ ಕಂಡು..
- ಎನ್.ಬಿ

Wednesday, May 6, 2020

ಆ ಕೊನೆಯ ಬೆಂಚಲ್ಲಿ ಕುಳಿತು
ಓರೆಗಣ್ಣಿನಲಿ ನೋಡುತ್ತಾ
ಎದೆಬಡಿತ ಹೆಚ್ಚಿಸುತ್ತಿದ್ದ ನಿನ್ನ
ತುಂಟು ಕಂಗಳ ನಾನಿನ್ನೂ ಮರೆತಿಲ್ಲ

ಮಾತನಾಡುವ ಹಂಬಲವಿದ್ದೂ
ಮಾತನಾಡದೇ ಉಳಿದ ಅದೆಷ್ಟೋ
ಮಾತುಗಳ ನಾ ಇನ್ನೂ ಮರೆತಿಲ್ಲ

ಇಬ್ಬರೇ ಇದ್ದಾಗಲೂ ಒಂದಿನಿತು
ಮಾತನಾಡದೇ ಮೌನವಾಗಿಯೇ
ಕಳೆದ ಆ ಘಳಿಗೆಯ ನಾನಿನ್ನೂ ಮರೆತಿಲ್ಲ

ಮೌನ ಮುರಿಯುವ ನೆಪದಲ್ಲಿ
ನಿನ್ನೆಡೆಗೆ ಮುಗುಳ್ನಕ್ಕಾಗ ಗಾಬರಿಯಿಂದ
ನೀ ಎದ್ದು ಹೋದದ್ದನ್ನ ನಾ ಇನ್ನೂ ಮರೆತಿಲ್ಲ

ಕಾಲೇಜಿನ ಗಂಟೆ ಬಾರಿಸುತ್ತಲೆ ಒಬ್ಬಳೇ
ನಡೆದು ಹೋಗಿಬಿಡುತ್ತಿದ್ದ ನಿನ್ನ ಕಂಡು
ಪೆಚ್ಚುಮೋರೆ ಹಾಕಿಕೊಳ್ಳುತ್ತಿದ್ದ ದಿನಗಳ
ನಾ ಇನ್ನೂ ಮರೆತಿಲ್ಲ

ಬಸ್ಸು ನಿಲ್ದಾಣದಲ್ಲಿ, ಆಟೋ ಸ್ಟ್ಯಾಂಡಿನಲ್ಲಿ
ನಿನ್ನೂರಿನ ಬೀದಿಗಳಲ್ಲಿ ಎದುರಾದಾಗ
ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸಿದ
ನಿನ್ನ ನಟನೆಯ ನಾ ಇನ್ನೂ ಮರೆತಿಲ್ಲ

ಮೌನವನೆ ಹೊದ್ದವರಂತೆ
ಮೌನದಲ್ಲಿಯೇ ಮುಳುಗಿ
ನನಗೂ ಮೌನದ ಅಮಲೇರಿಸಿದ
ನಿನ್ನ ನಾ ಇನ್ನೂ ಮರೆತಿಲ್ಲ...

- ಎನ್.ಬಿ

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ